ಫೇಲಿಂಗ್ ದ್ರಾವಣ - 
ಕ್ಯೂಪ್ರಿಕ್ ಸಲ್ಫೇಟ್, ಸೋಡಿಯಮ್-ಪೊಟ್ಯಾಸಿಯಮ್ ಟಾಟ್ರ್ರೇಟ್ ಮತ್ತು ಸೋಡಿಯಮ್ ಹೈಡ್ರಾಕ್ಸೈಡುಗಳ ಮಿಶ್ರಣ. ಜರ್ಮನಿಯ ರಸಾಯನವಿಜ್ಞಾನಿ ಹರ್ಮನ್ ಫಾನ್ ಫೇಲಿಂಗ್ (1812-85) ಎಂಬಾತ ಇದನ್ನು ತಯಾರಿಸಿದ. ವಿಶ್ಲೇಷಕ ರಸಾಯನ ವಿಜ್ಞಾನದಲ್ಲಿ ಫ್ರಕ್ಟೋಸ್, ಗ್ಲೂಕೋಸ್ ಮೊದಲಾದ ಶರ್ಕರದಂಥ ಅಪಕರ್ಷಣಕಾರಿ ಧಾತುಗಳ ಅಸ್ತಿತ್ವ ಪರೀಕ್ಷಿಸಲು ಇದರ ಬಳಕೆ ಇದೆ.

	6.9 ಗ್ರಾಮ್ ಶುದ್ಧ ಕಾಪರ್ ಸಲ್ಫೇಟ್ ಹರಳುಗಳನ್ನು ಒಂದು ತೊಟ್ಟು ಸಲ್ಫ್ಯೂರಿಕ್ ಆಮ್ಲ ಬೆರೆತಿರುವ, 100 ಮಿಲೀ ನೀರಿನಲ್ಲಿ ವಿಲೀನಮಾಡಿ ಉಂಟಾಗುವ ದ್ರಾವಣವನ್ನೂ 35 ಗ್ರಾಮ್ ರಾಷಲ್ ಲವಣ (ಸೋಡಿಯಮ್-ಪೊಟ್ಯಾಸಿಯಮ್ ಟಾಟ್ರ್ರೇಟ್) ಮತ್ತು 10 ಗ್ರಾಮ್ ಸೋಡಿಯಮ್ ಹೈಡ್ರಾಕ್ಸೈಡುಗಳನ್ನು 100 ಮಿಲೀ ನೀರಿನಲ್ಲಿ ವಿಲೀನ ಮಾಡಿದರೆ ಉಂಟಾಗುವ ದ್ರಾವಣವನ್ನೂ ತಲಾ 25 ಗ್ರಾಮ್‍ಗಳಷ್ಟು ಪರಿಮಾಣದಲ್ಲಿ ಒಂದರೊಡನೊಂದು ಮಿಶ್ರ ಮಾಡಿದಾಗ ಲಭಿಸುವ, ಕಡುನೀಲಿ ಬಣ್ಣದ ದ್ರಾವಣವೇ ಫೇಲಿಂಗ್ ದ್ರಾವಣ. ಇದನ್ನು ಕಾಸಿದಾಗ ಕೆಂಪು ಬಣ್ಣದ ಅವಕ್ಷೇಪ (ಪ್ರೆಸಿಪಿಟೇಟ್) ಉಂಟಾಗುತ್ತದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ